ಬರಾನಿ, ರಾಬರ್ಟ್
1876-1936. ಸ್ವಿಟ್ಸರ್ಲೆಂಡ್-ಆಸ್ಟ್ರಿಯ ಪ್ರಾಂತ್ಯದ ಕಿವಿ ಮೂಗು ಗಂಟಲುಗಳ ಪ್ರಸಿದ್ಧ ವೈದ್ಯ. ಜನನ 22.4.1876. ಮರಣ 8.4.1936. ದೇಹದ ಸಮಸ್ಥಿತಿಯ ನಿಯಂತ್ರಣದಲ್ಲಿ ಒಳಗಿವಿಯ ಮತ್ತು ಕಿರಿಮಸ್ತಿಷ್ಕದ (ಸೆರಿಬೆಲ್ಲಮ್) ಪಾತ್ರವನ್ನು ನಿಷ್ಕøಷ್ಟವಾಗಿ ವಿವರಿಸಿ ದೇಹಕಾರ್ಯ ಹಾಗೂ ವೈದ್ಯಕೀಯಕ್ಕೆ ಮೀಸಲಾಗಿರುವ ನೊಬೆಲ್ ಪಾರಿತೋಷಿಕ ಪಡೆದ (1914). ದೇಹದ ಸಮಸ್ಥಿತಿ ಕಾಯ್ದುಕೊಳ್ಳಲು ಸಾಧ್ಯವಾಗುವುದು. ಒಳಗಿವಿಯ ಒಂದು ಭಾಗದ (ವೆಸ್ಟಿಬ್ಯೂಲ್) ಕಾರ್ಯಾಚರಣೆಯಿಂದ ಎಂಬ ಸಂಗತಿ ಫ್ಲೋರೆನ್ಸ್, ಮ್ಯಾಚ್, ಈವಾಲ್ಡ್ ಮುಂತಾದ ವೈದ್ಯಕೀಯ ವಿಜ್ಞಾನಿಗಳು ಪಾರಿವಾಳ ಹಾಗೂ ಮೊಲಗಳ ಮೇಲೆ ಮಾಡಿದ್ದ ಪ್ರಯೋಗಗಳಿಂದ ತಿಳಿದುಬಂದಿತ್ತು. ಒಳಗಿವಿಯ ಇದೇ ಭಾಗ ರೋಗಗ್ರಸ್ತವಾಗಿರುವುದೇ ಕೆಲವು ರೋಗಸ್ಥಿತಿಗಳಲ್ಲಿ ಕಂಡುಬರುವ ತಲೆಸುತ್ತು ಹಾಗೂ ತತ್ತರಿಸುವಿಕೆಗಳ ಕಾರಣ ಎಂದು ಮೆನಿಯೇರ್ ಎಂಬ ವಿಜ್ಞಾನಿ ತೀರ್ಮಾನಿಸಿದ್ದ. ಇವುಗಳ ವಿಷಯದಲ್ಲಿ ನಿಷ್ಕøಷ್ಟ ಮಾಹಿತಿಗಳನ್ನು ಪಡೆಯಬೇಕು ಬರಾನಿ ಪಾಲಿಟ್ಸರನ ನೇತೃತ್ವದಲ್ಲಿ ಪ್ರಾಯೋಗಿಕ ವ್ಯಾಸಂಗ ಮಾಡಿ ಸಮಸ್ಥಿತಿಯ ನಿಯಂತ್ರಣದಲ್ಲಿ ಒಳಗಿವಿ ಮಾತ್ರವಲ್ಲದೆ ಕಿರಿಮಸ್ತಿಷ್ಕ ಕೂಡ ಭಾಗವಹಿಸ್ಮತ್ತದೆಂದೂ, ಇವೆರಡೂ ಪರಸ್ಪರ ಸಂಬಂಧ ಹೊಂದಿದ್ದು ಸಹಕರಿಸಿ ಕೆಲಸಮಾಡುವುದರಿಂದ ಸಮಸ್ಥಿತಿ ಸಾಧ್ಯವೆಚಿದೂ, ಇವೆರಡರ ಪೈಕಿ ಯಾವುದು ರೋಗಗ್ರಸ್ತವಾದರೂ ಸಮಸ್ಥಿತಿಯ ಹತೋಟಿ ನಾಶವಾಗಿ ತತ್ತರಿಸುವಿಕೆ, ತಲೆಸುತ್ತು, ವಮನ ಮುಂತಾದವು ಉಂಟಾಗುವುವೆಂದೂ ವಿಶದಪಡಿಸಿದ (1913-14).

	1914ರಲ್ಲಿ ಒಂದನೆಯ ಮಹಾಯುದ್ಧ ಪ್ರಾರಂಭವಾದಾಗ ಮಿದುಳು ಗಾಯಗೊಂಡ ಜನರನ್ನು ಚಿಕಿತ್ಸಿಸಲು ತನ್ನದೇ ಆದ ವಿಧಾನದ ಉಪಯುಕ್ತತೆ ತಿಳಿದುಕೊಳ್ಳಲು ಯುದ್ಧರಂಗದಲ್ಲಿ ಒಳ್ಳೆಯ ಅವಕಾಶ ಸಿಕ್ಕುತ್ತದೆಂದು ಭಾವಿಸಿದ ಬರಾನಿ ತನ್ನ ಮಂಡಿ ಆಡದಂತೆ ಊನಗೊಂಡಿದ್ದರೂ ಸ್ವಂತೇಚ್ಛೆಯಿಂದ ಸೈನ್ಯಕ್ಕೆ ದಾಖಲಾಗಿ ಸೇವೆಸಲ್ಲಿಸುತ್ತಿದ್ದ. ಆ ವೇಳೆ ರಷ್ಯದ ಸೈನಿಕರಿಗೆ ಸೆರೆ ಸಿಕ್ಕಿ ಯುದ್ಧಕೈದಿಯಾಗಿ ಸೈಬೀರಿಯಕ್ಕೆ ಕಳುಹಿಸಲ್ಪಟ್ಟ. ಅದೇ ವೇಳೆ ಸಮಸ್ಥಿತಿಯ ವಿಚಾರ ಸಂಶೋಧನೆಗಳಿಗಾಗಿ ಅವನಿಗೆ ನೊಬೆಲ್ ಪಾರಿತೋಷಿಕ ಪ್ರದಾನಿಸಲ್ಪಟ್ಟಿತು. ಆದರೆ ಅವನು ಅದನ್ನು ಸ್ವೀಕರಿಸುವಂತಿರಲಿಲ್ಲ. ಆಗ ಸ್ವೀಡನ್ನಿನ ರೆಡ್‍ಕ್ರಾಸ್ ಸಂಸ್ಥೆ ಮಧ್ಯಸ್ಥಿಕೆ ವಹಿಸಿ 1915ರಲ್ಲಿ ಅವನನ್ನು ಬಿಡುಗಡೆ ಮಾಡಿಸಿ ರಾಯಭಾರಿಗಳ ಮುಖಾಂತರ ಅವನು ನೊಬೆಲ್ ಪಾರಿತೋಷಿಕ ಪಡೆಯುವಂತೆ ಏರ್ಪಾಡು ಮಾಡಿತು. ಬಿಡುಗಡೆ ಆದ ನಂತರ ಅವನು ಸ್ವೀಡನ್ನಿಗೆ ಹೋಗಿ ನೆಲಸಿದ. ಅಲ್ಲಿ ಉಪ್ಸಲ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿಯೂ, ಕಿವಿ ಮೂಗು ಗಂಟಲುಗಳ ರೋಗಗಳ ಚಿಕಿತ್ಸೆಗೆಂದೇ ಬೇರೆಯಾಗಿದ್ದ ಸಂಸ್ಥೆಯ ನಿರ್ದೇಶಕನಾಗಿಯೂ 1917ರಲ್ಲಿ ನೇಮಿಸಲ್ಪಟ್ಟು ಬದುಕಿನ ಕೊನೆಯ ತನಕವೂ ಪ್ರವಚನ ಸಂಶೋಧನೆಗಳಲ್ಲಿ ನಿರತನಾಗಿದ್ದ.

	ಫ್ಲೋರೆನ್ಸ್ ಮುಂತಾದವರು ಪ್ರಾಣಿಗಳಲ್ಲಿ ಸಮಸ್ಥಿತಿಗೆ ಕಾರಣಭೂತವೆಂದು ಪ್ರತಿಪಾದಿಸಿದ್ದ ಅಂಗ ಮನುಷ್ಯರಲ್ಲಿ ರುಂಡವನ್ನು ಮುಂಡದಮೇಲೆ ಎಡ, ಬಲ ಮೇಲೆ ಕೆಳಗೆ ಇತ್ಯಾದಿ ಚಲಿಸಿದಾಗ ಯಾವರೀತಿ ಪ್ರತಿಕ್ರಿಯೆ ತೋರಿಸುವುದೆಂಬುದನ್ನು ಬರಾನಿ ವಿಶದಪಡಿಸಿದ ಮತ್ತು ಈ ಪ್ರತಿಕ್ರಿಯೆಗಳಿಂದ ಕಣ್ಣುಗುಡ್ಡೆಗಳ ಎಡಬಲ ಚಲನೆಗಳು ಅನೈಚ್ಛಿಕವಾಗಿ ಆಗುವುವು (ನಿಸ್ವಾಗ್‍ಮಸ್) ಮತ್ತು ದೇಹದ ಐಚ್ಛಿಕ ಸ್ನಾಯುಗಳ ಸ್ಥಿತಿ ವ್ಯತ್ಯಾಸ ಆಗುವುದು ಎಂದೂ ತೋರಿಸಿದ. ಎಡಗಿವಿಯ ಒಂದು ಭಾಗವಾದ ಒಳಗಿವಿ ನಡುವೆ (ವೆಸ್ಟಬ್ಯೂಲ್ ಎಂಬಲ್ಲಿ) ಇರುವ ಅರ್ಧವರ್ತುಲಾಕಾರ ನಾಳಗಳಲ್ಲಿ (ಸೆಮಿಸಕ್ರ್ಯುಲರ್ ಕೆನಾಲ್ಸ್) ತುಂಬಿರುವ ಮಂದ ದ್ರವದ ಚಲನೆ ಈ ರೀತಿ ಮಾಡಿದಾಗ ಕಣ್ಣಿನ ಅನೈಚ್ಛಿಕ ಚಲನೆ ಉಂಟುಮಾಡಬಹುದೆಂದೂ ಪ್ರಾಯೋಗಿಕವಾಗಿ ತೋರಿಸಿದ. ಎಡ ಅಥವಾ ಬಲ ಭಾಗದ ಒಂದೇ ಕಿವಿಯ ಶ್ರವಣ ಸಾಮಥ್ರ್ಯ ನಾಶಕವನ್ನು ಕರಾರುವಾಕ್ಕಾಗಿ ಪತ್ತೆಮಾಡಬಲ್ಲ ವಿಧಾನವನ್ನೂ ಬರಾನಿ ಪ್ರಕಟಿಸಿದ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ